ಪುಷ್ಟೂ
ಆಫ್ಘಾನಿಸ್ತಾನದಲ್ಲೂ ಅದರ ಸುತ್ತಮುತ್ತಲ ಪ್ರದೇಶಗಳಲ್ಲೂ ಬಳಕೆಯಲ್ಲಿರುವ ಮುಖ್ಯ ಭಾಷೆ. ಆಫ್ಘಾನಿಸ್ತಾನ ಬಲೂಚಿಸ್ತಾನ ಮುಂತಾದ ಕಡೆಗಳಲ್ಲಿ ಸುಮಾರು ನಾಲ್ಕೂವರೆ ಕೋಟಿಗಿಂತಲೂ ಹೆಚ್ಚು ಜನರು ಈ ಭಾಷೆಯನ್ನು ಆಡುವವರಿದ್ದಾರೆ. ಅಂತೆಯೇ ಕೆಲವರು ಇದನ್ನು ಆಫ್ಘಾನಿ ಭಾಷೆ ಎಂತಲೂ ಕರೆಯುತ್ತಾರೆ. ಇಂಡೋ-ಯೂರೋಪಿಯನ್ ಭಾಷಾ ಪರಿವಾರಕ್ಕೆ ಸೇರಿದ ಇಂಡೋ ಇರಾನಿಯನ್ ಭಾಷಾ ಶಾಖೆಗೆ ಸೇರಿದ ಮುಖ್ಯ ಭಾಷೆಗಳಲ್ಲಿ ಇದೂ ಒಂದು. ದರ ದಸ್ತಾನ್, ಪಾಮೀರ್, ಕಾಫಿರ್‍ಸ್ತಾನ ಮುಂತಾದ ಕಡೆಗಳಲ್ಲೂ ಈ ಭಾಷೆಯನ್ನು ಆಡುವವರಿದ್ದಾರೆ. ಇದರ ಉಪಭಾಷೆಗಳನ್ನು ಮುಖ್ಯವಾಗಿ ದಕ್ಷಿಣ-ಪಶ್ಚಿಮೀ ಉಪಭಾಷೆಗಳು ಮತ್ತು ಉತ್ತರ-ಪೂರ್ವಿ ಉಪಭಾಷೆಗಳು ಎಂದು ವರ್ಗೀಕರಿಸಲಾಗಿದೆ. ದಕ್ಷಿಣ ಪಶ್ಚಿಮೀ ಗುಂಪಿನಲ್ಲಿ ಖಟಕ್, ಬನುಈ, ಬನ್ನೂಚಿ, ವಜೀರಿ, ಮರ್ವತ್, ಕಾಕಡಿ, ಲೂಣಿ, ಶಿರಾಗಿ ಮತ್ತು ತರಿನೊ ಮುಂತಾದುವೂ ಉತ್ತರ-ಪೂರ್ವೀ ಗುಂಪಿನಲ್ಲಿ ಪೆಶಾವರಿ, ಬುನೇರ್, ಯುಸುಫ್‍ಜಯಿ, ಬಜಾರ್, ಗಿಲ್ಜಿಯ, ಅಫ್ರೀದಿ ಮುಂತಾದುವೂ ಮುಖ್ಯ.

	ಇಂಡೋ-ಇರಾನೀ ಶಾಖೆಗೆ ಸೇರಿದ ಬಹುತೇಕ ಭಾಷೆಗಳು ನೇರವಾಗಿ ಅವ್ಯಸ್ತದಿಂದಲೇ ವಿಕಾಸಗೊಂಡು ಬೆಳೆದು ಬಂದವು ಎಂದು ಕೆಲವು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಅಂತೆಯೇ ಪುಷ್ಟೂ ಕೂಡ ಅವೆಸ್ತದಿಂದ ವಿಕಾಸಗೊಂಡಿರಬಹುದೆಂದು ಕೆಲವರ ಅಭಿಪ್ರಾಯ. ಪ್ರಾಚೀನ ಪಾರಸಿ ಇಲ್ಲವೇ ಮಧ್ಯಕಾಲೀನ ಪಾರಸಿಯಿಂದ ವಿಕಾಸಗೊಂಡದ್ದೆಂದು ಮತ್ತೆ ಕೆಲವರ ಊಹೆ. ಕೆಲವು ವಿಚಾರಗಳಲ್ಲಿ ಅವೆಸ್ತ ಭಾಷೆಯನ್ನೂ ಮತ್ತೆ ಕೆಲವು ವ್ಯಾಕರಣ ಅಂಶಗಳಲ್ಲಿ ಪಾರಸಿಯನ್ನೂ ಇದು ಹೋಲುವುದಂತೂ ನಿಜ. ಅಲ್ಲದೆ, ಇದು ಸಂಸ್ಕøತವನ್ನು ಹೋಲುತ್ತದೆ. ಆದ್ದರಿಂದ ಇದರ ಮೂಲ ಅವೆಸ್ತ ಇಲ್ಲವೇ ಪಾರಸಿ ಎನ್ನುವವರೂ ಇದ್ದಾರೆ. ಇದರ ಮೇಲೆ ಅನೇಕ ಭಾರತೀಯ ಭಾಷೆಗಳ ಪ್ರಭಾವ ಇರುವುದೂ ಕಂಡುಬಂದಿದೆ. ಇದರ ಧ್ವನಿವ್ಯವಸ್ಥೆ, ಪದ ಹಾಗೂ ವಾಕ್ಯ ರಚನಾ ಕ್ರಮ ಮುಂತಾದ ವಿಚಾರಗಳು ತುಂಬ ಸರಳ. ಈ ವಿಚಾರದಲ್ಲಿದು ಭಾರತೀಯ ಭಾಷೆಗಳಿಗೆ ಹತ್ತಿರ. ಇದರ ಬೇರೊಂದು ರೂಪ ಪಖ್ತೊ. ಇವೆರಡರ ನಡುವೆ ಸಾಕಷ್ಟು ಅಂತರ ಉಂಟು. ಪುಷ್ಟೂ ಆಫ್ಘಾನಿಸ್ತಾನದ ದಕ್ಷಿಣ-ಪೂರ್ವಗಳ ಬೇರೆ ಬೇರೆ ಭಾಗಗಳಲ್ಲಿ ಕಂಡುಬಂದರೆ ಪಖ್ತೊ ಪಶ್ಚಿಮೋತ್ತರ ಭಾಗಗಳಲ್ಲಿ ಕಂಡುಬರುವುದು. 

ಪುಷ್ಟೂ ಭಾಷೆ ತುಂಬ ಸರಳ ಹಾಗೂ ಸುಮಧುರ. ಮೊದಮೊದಲು ಸಂಯೋಗಾವಸ್ಥೆಯಲ್ಲಿದ್ದು ಈಗ ವಿಯೋಗಾವಸ್ತೆಯ ಕಡೆಗೆ ಪರಿವರ್ತನೆಗೊಳ್ಳುತ್ತಿದೆ. ಈ ಭಾಷೆಯ ಸಾಹಿತ್ಯದ ಬಗ್ಗೆ ಹೆಚ್ಚು ವಿವರಗಳು ತಿಳಿದಿಲ್ಲ.	
(ಕೆ.ಕೆ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ